ಅಪ್ಸರೆಯರು
	ಸ್ವರ್ಗದ ಹೆಂಗಳೆಯರು; ಗಂಧರ್ವರ ಹೆಂಡತಿಯರೆಂದು ಕಲ್ಪನೆ. ನೀರಿನಲ್ಲಿ ವಿಹರಿಸುವುದು ಅವರಿಗೆ ತುಂಬ ಪ್ರಿಯವಾದ ಹವ್ಯಾಸವಾದುದರಿಂದ ಅವರಿಗೆ ಈ ಹೆಸರು (ಅಪ್ಸು ನಿರ್ಮಥನಾದೇವ ರಸಾತ್). ಹಾಲುಗಡಲನ್ನು ದೇವಾಸುರರು ಕಡೆಯುವಾಗ ಜನಿಸಿದರು. ಸಾಮಾನ್ಯವಾಗಿ ದೇವರಾಜ ಇಂದ್ರನ ಬಳಿ ಊಳಿಗದಲ್ಲಿರುವವರು. ಇಂದ್ರನಿಗೆ ಅಪ್ಸರೆಯರ ಒಡೆಯನೆಂದೇ ಹೆಸರು. ಇಂದ್ರಸಭೆಯಲ್ಲಿ ಗೀತ, ನೃತ್ಯ, ನಾಟಕಗಳನ್ನು ನಡೆಸಿ ರಂಜನೆಗೆ ಕಾರಣವಾಗುವುದೇ ಇವರ ಮುಖ್ಯಕೆಲಸ. ಋಷಿಗಳು ತಪಶ್ಚರ್ಯೆ ಮಾಡುವಾಗ ಇಂದ್ರಪದವಿಗೆ ಆತಂಕವಾದರೆ ಇಂಥವರ ತಪೋಭಂಗಮಾಡುವುದೂ ಇವರ ಕೆಲಸವೇ. ಇವರು ಬೇಕೆಂದ ಹಾಗೆ ರೂಪವನ್ನು ಮರೆಸಿಕೊಳ್ಳಬಲ್ಲರೆಂದೂ ಪ್ರಭಾವಶಾಲಿಗಳೆಂದೂ ಪುರಾಣದ ಕಥೆಗಳಿವೆ. ಇವರಿಗೆ ಸ್ವರ್ವೇಶ್ಯೆಯರು ಎಂದರೆ ಸ್ವರ್ಗಲೋಕದ ವೇಶ್ಯೆಯರು ಎಂದೂ ವ್ಯವಹಾರವಿದೆ. ಇವರಲ್ಲಿ ಹದಿನಾಲ್ಕು ಬಗೆಯುಂಟೆಂದು ಬಾಣಭಟ್ಟ ತಿಳಿಸುತ್ತಾನೆ. ಊರ್ವಶೀ, ಮೇನಕಾ, ರಂಭಾ, ತಿಲೋತ್ತಮಾ ಇವರ ರೂಪದ ವೈಶಿಷ್ಟ್ಯವೂ ತಪೋವಿಘ್ನಸಾಮಥ್ರ್ಯವೂ ಹಲವಾರು ಕಥೆಗಳಲ್ಲಿ ಬಂದಿವೆ. ನರನಾರಾಯಣ ಋಷಿಗಳು ಬದರಿಯಲ್ಲಿ ತಪಶ್ಚರ್ಯೆ ಮಾಡುತ್ತಿದ್ದಾಗ, ಅವರ ತಪಸ್ಸನ್ನು ಭಂಗಪಡಿಸಲು ಅಪ್ಸರೆಯರು ಬಂದು ನಾರಾಯಣ ಋಷಿಯ ತೊಡೆಯನ್ನು ಕೆರೆದರೆಂದೂ ಅದರಿಂದ ಸುರಸುಂದರಿಯಾದ ಊರ್ವಶಿ ಹೊರಬಂದಳೆಂದೂ ಅವಳ ಲಾವಣ್ಯರಾಶಿಯನ್ನು ಕಂಡು ಉಳಿದ ಅಪ್ಸರೆಯರು ನಾಚಿ ಹಿಂದಿರುಗಿದರೆಂದೂ ಕಥೆಯಿದೆ. ಈ ಊರ್ವಶಿ ಶಾಪದಿಂದ ಭೂಮಿಗೆ ಬಂದು ಪುರುರವನೆಂಬ ರಾಜನೊಂದಿಗೆ ಬಾಳಿದಳು. ಅರ್ಜುನನಿಗೆ ನಪುಂಸಕನಾಗುವಂತೆ ಶಾಪ ಕೊಟ್ಟವಳೂ ಇವಳೇ. ಮೇನಕೆ ವಿಶ್ವಾಮಿತ್ರನ ತಪೋಭಂಗ ಮಾಡಿ ಆತನಿಂದ ಶಕುಂತಲೆಯನ್ನು ಪಡೆದಳು. ರಂಭೆ ಕಶ್ಯಪ ಋಷಿಯ ಮಗಳು; ಪ್ರಾಧೆ ಅವಳ ತಾಯಿ. ಈಕೆ ತುಂಬುರು ಎನ್ನುವ ಗಂಧರ್ವಗಾಯಕನ ಹೆಂಡತಿ. ವಿಶ್ವಾಮಿತ್ರ ಇವಳನ್ನು ಶಿಲೆಯಾಗುವಂತೆ ಶಪಿಸಿದ ಕಥೆ ರಾಮಾಯಣದಲ್ಲಿ ಬರುತ್ತದೆ. ರಂಭೆ ಕುಬೇರನ ಪ್ರೇಯಸಿಯೆಂದೂ ಕಥೆಯಿದೆ. ತಿಲೋತ್ತಮೆ ವಿಶ್ವಕರ್ಮನ ಮಗಳು; ಅರಿಷ್ಟೆ ಅವಳ ತಾಯಿ. ಉಳಿದ ಅಪ್ಸರೆಯರಿಗಿಂತ ಇವಳು ಒಂದು ಎಳ್ಳು ಕಾಳಿನಷ್ಟಾದರೂ ಹೆಚ್ಚು ರೂಪವತಿ (ತಿಲೋತ್ತಮಾ). ದೂರ್ವಾಸ ಋಷಿಯಿಂದ ಈಕೆಗೆ ಶಾಪ ಒದಗಿದ ಕಥೆ ಹರಿವಂಶದಲ್ಲಿ ಬರುತ್ತದೆ.   						
	
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ